ಐತರೇಯ ಉಪನಿಷತ್ತು: ಇದು ಋಗ್ವೇದಶಾಖೆಗೆ ಸೇರಿದ ಇದೇ ಹೆಸರಿನ ಆರಣ್ಯಕದ ಕೆಲವು ಅಧ್ಯಾಯಗಳನ್ನು ಒಳಗೊಂಡಿದೆ. ಬಹ್ನೃಚೋಪ ನಿಷತ್ತೆಂತಲೂ ಮಹಾ ಐತರೇಯ ಉಪನಿಷತ್ತೆಂತಲೂ ಇದಕ್ಕೆ ಹೆಸರುಗಳಿವೆ. ಆರಣ್ಯಕ ಮತ್ತು ಉಪನಿಷತ್ತುಗಳನ್ನು ವಿಂಗಡಿಸಿ ಇದಿಷ್ಟು ಆರಣ್ಯಕ, ಇದು ಉಪನಿಷತ್ತು ಎಂದು ಪರಿಗಣಿಸುವುದರಲ್ಲಿ ಅಭಿಪ್ರಾಯ ಭೇದವಿದೆ.
ಮಹೀದಾಸ ಐತರೇಯ ಇದರ ಋಷಿ (ಮಂತ್ರದೃಕ್). ಅದರಿಂದ ಇದಕ್ಕೆ ಈ ಹೆಸರು. ಈತ ವಿಶಾಲಾ ಎಂಬಾಕೆಯ ಪುತ್ರನೆಂದೂ ಶ್ರೀಮನ್ನಾರಾಯಣನ ಅವತಾರವೆಂದೂ ಮಧ್ವಾಚಾರ್ಯರ ಭಾವನೆ. ಇತರಾ ಎಂಬುವಳ ಮಗ ಮಹಿದಾಸ. ಯಜ್ಞಸಭೆಗಳಲ್ಲಿ ತಂದೆ ತನ್ನ ಇತರ ಪತ್ನಿಯರ ಮಕ್ಕಳೊಡನೆ ಈತನನ್ನು ತೊಡೆಯ ಮೇಲೆ ಕೂರಿಸಿಕೊಳ್ಳದೆ ತಾತ್ಸಾರ ತೋರಿಸಲು, ಕರುಳು ನೊಂದ ತಾಯಿ ತನ್ನ ಕುಲದೈವ ಮಹೀ(ಭೂಮಿ) ದೇವಿಯನ್ನು ಪ್ರಾರ್ಥಿಸಲು ಆಕೆಯ ವರಪ್ರಸಾದದಿಂದ ಈತನಿಗೆ ಅಸಮಾನವಾದ ದಿವ್ಯಜ್ಞಾನ ಸಿದ್ಧಿಸಿತು-ಎನ್ನುವ ಈ ಐತಿಹ್ಯವೊಂದನ್ನು ಸಾಯಣರು ಉಲ್ಲೇಖಿಸುತ್ತಾರೆ.

ಇದು ಅತಿ ಪುರಾತನವಾದ ಗದ್ಯರೂಪದಲ್ಲಿದೆ, ಪುರಾತನವಾದ ಉಪನಿಷತ್ತುಗಳಲ್ಲಿ ಇದೂ ಒಂದು. ಇರುವುದು ಚಿಕ್ಕ ಚಿಕ್ಕ ಮೂರೇ ಅಧ್ಯಾಯಗಳು. ಒಟ್ಟು ಐದು ಖಂಡಗಳೆಂಬ ಉಪವಿಭಾಗಗಳು. ಹತ್ತು ಪಾಯಿಂಟ್ ಅಚ್ಚುಮೊಳೆಗಳಲ್ಲಿ ಮುದ್ರಿಸಿದರೆ ಸುಮಾರು ಎರಡು ಕಲಮುಗಳಾಗುವಷ್ಟು ಇದರ ಗಾತ್ರ. ಅತಿ ಚಿಕ್ಕ ಉಪನಿಷತ್ತುಗಳಲ್ಲಿ ಪ್ರಾಯಶಃ ಇದಕ್ಕೆ ಮೂರನೆಯ ಸ್ಥಾನ. ವಾಙ್ಮೀ ಮನಸಿ ಪ್ರತಿಷ್ಠಿತಾ ಎಂಬುದು ಇದರ ಶಾಂತಿಮಂತ್ರ. ಕೊನೆಯಲ್ಲಿ ಪ್ರಜ್ಞಾನಂ ಬ್ರಹ್ಮ ಎಂಬ ಉಪದೇಶವಿದೆ.

1. ಇದೆಲ್ಲವೂ ಮೊಟ್ಟಮೊದಲು ಆತ್ಮವೊಂದೇ ಆಗಿತ್ತು; ಮತ್ತೇನೂ ಇರಲಿಲ್ಲ ಎಂದು ಪ್ರಾರಂಭವಾಗಿ ಆತ್ಮ ಲೋಕಸೃಷ್ಟಿ ಮಾಡಲು ಇಚ್ಛಿಸಿ ಅಂಭೋ ಲೋಕ, ಮರೀಚಿಲೋಕ, ಮರ(ಮರ್ತ್ಯ) ಲೋಕ ಮತ್ತು ಆಪೋಲೋಕಗಳನ್ನೂ ಲೋಕಪಾಲಕರನ್ನೂ ಸೃಷ್ಟಿಸುತ್ತಾನೆ.

2. ಈ ರೀತಿ ಸೃಷ್ಟರಾದ ಲೋಕಪಾಲಕರು ಅಸ್ತಿತ್ವದ ಮಹಾರ್ಣವಕ್ಕೆ ಬಿದ್ದು ಅಶನ ಮತ್ತು ಪಿಪಾಸೆಗಳಿಗೆ ಸಿಲುಕಿದರು; ಅವರಿಗೊಂದು ಭೌತಿಕ ನೆಲೆ ಬೇಕಾಯಿತು; ಇತರ ಯಾವ ಪ್ರಾಣಿಗಳ ಶರೀರವೂ ಒಗ್ಗದೆ ಮಾನವ ಶರೀರ ಮೆಚ್ಚುಗೆಯಾಯಿತು; ಪಂಚೇಂದ್ರಿಯತತ್ತ್ವಗಳೂ, ಪಾಂಚಭೌತಿಕತತ್ತ್ವಗಳೂ, ಮೃತ್ಯು, ಅಪಾನವಾಯು, ರೇತಸ್ಸು ಮುಂತಾದ ಲೋಕಪಾಲರೂ ಅದರಲ್ಲಿ ಮನೆ ಮಾಡಿಕೊಂಡರು. ಹಸಿವು ತೃಷೆಗಳಿಗೂ ಅಲ್ಲಿ ಸ್ಥಾನ ಸಿಕ್ಕಿತು.

3. ಲೋಕಗಳಿಗಾಗಿ, ಲೋಕಪಾಲಕರಿಗಾಗಿ ಅನ್ನ ಸೃಷ್ಟಿಯಾಯಿತು; ಆ ಅನ್ನವನ್ನು ಇತರ ಲೋಕಪಾಲಕರು ಗ್ರಹಿಸಲಾಗಲಿಲ್ಲ; ಅಪಾನವಾಯು ಮಾತ್ರ ಗ್ರಹಿಸಿತು; ಆದ್ದರಿಂದ ಅದಕ್ಕೆ ಅನ್ನಾಯುವೆಂದು ಮತ್ತೊಂದು ಹೆಸರು; ಕಡೆಯಲ್ಲಿ ಆತ್ಮ ಶಿರಃಕಪಾಲವನ್ನು ಭೇದಿಸಿಕೊಂಡು ಪ್ರವೇಶಿಸಿದ. ಇದೇ ಆತನ ನಾಂದನವೆಂಬ ಸ್ಥಾನ.

ಅಲ್ಲಿ ಜೀವಾತ್ಮನಾದ ಅವನಿಗೆ ಮೂರು ಅವಸ್ಥೆ (ಸ್ವಪ್ನ) ಗಳಿಗೆ ಉಚಿತವಾದ ಮೂರು ಆವಾಸಸ್ಥಾನ (ಅವಸಥ) ಗಳು; ಅಲ್ಲಿ ಅವನು ತನ್ನ ಸುತ್ತೆಲ್ಲ ಇದ್ದ ನಾಮರೂಪಾತ್ಮಕವಾದ ಚರಾಚರ ಜಗತ್ತನ್ನು ನೋಡಿದ. ಆದರೆ ಅದೊಂದು ಅದ್ಭುತ-ಅದೆಲ್ಲವೂ ತಾನೇ-ಬ್ರಹ್ಮನೇ-ಆಗಿತ್ತು.

4. ಎರಡನೆಯ ಅಧ್ಯಾಯ ಜನ್ಮಾಂತರಕ್ಕೊಳಗಾದ ಆತ್ಮ ಮಾನವ ಶರೀರದಲ್ಲಿ ಹುಟ್ಟಿ ಆತ್ಮಸಾಕ್ಷಾತ್ಕಾರ ಮಾಡಿಕೊಂಡು ಅಮೃತಾತ್ಮವಾಗುವುದೆಂಬ ಸಂದೇಶವನ್ನು ಕೊಡುತ್ತದೆ.
5. ನಾವು ಆತ್ಮವೆಂದು ಉಪಾಸಿಸುವ ಇವನು ಯಾರು? ಪರಬ್ರಹ್ಮ ಮತ್ತು ಅಪರಬ್ರಹ್ಮರಿಬ್ಬರಲ್ಲಿ ಇವನು ಯಾರು? ಎಂದು ಪ್ರಶ್ನಿಸಿಕೊಂಡು ಪಂಚೇಂದ್ರಿಯ ತತ್ತ್ವಗಳು, ಪಾಂಚಭೌತಿಕ ತತ್ತ್ವಗಳು, ಹೃದಯ, ಮನಸ್ಸು, ಸಂಜ್ಞಾನ, ವಿಜ್ಞಾನ, ಪ್ರಜ್ಞಾನಾದಿಗಳೂ, ಇಂದ್ರ, ಪ್ರಜಾಪತಿ ಮುಂತಾದ ದೈವೀತತ್ತ್ವಗಳು ಸಕಲ ಚರಾಚರ ಜಗತ್ತು-ಇವೆಲ್ಲ ಪ್ರಜ್ಞಾಪ್ರತಿಷ್ಠಿತವಾದ ಬ್ರಹ್ಮವೆಂದು ಮೂರನೆಯ ಅಧ್ಯಾಯ ಹೇಳಿ ಸೃಷ್ಟಿ ಬ್ರಹ್ಮನಿಂದ-ಆತ್ಮನಿಂದ-ವಿಕಾಸಗೊಂಡು, ಅಂತ್ಯದಲ್ಲಿ (?) ಅಲ್ಲಿಯೇ ಪ್ರತಿಷ್ಠಿತವಾಗುತ್ತದೆಂದು ಸಾರುತ್ತದೆ.
(ಸಿ.ಜಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ